ಬೊಂಬಾಟ್ ಬೆಂಗಳೂರು ಯೌತ್ ಕೌನ್ಸಿಲ್” ವಿಶಿಷ್ಟ ಕಾರ್ಯಕ್ರಮದ ಆರಂಭ
ದಿನಾಂಕ 12 ಜನವರಿ 2019
ಪತ್ರಿಕಾ ಪ್ರಕಟಣೆ
ರಾಷ್ಟ್ರೀಯ ಯುವ ದಿನ ಪ್ರಯುಕ್ತ ಆಪ್ ವತಿಯಿಂದ “ಬೊಂಬಾಟ್ ಬೆಂಗಳೂರು ಯೌತ್ ಕೌನ್ಸಿಲ್” ವಿಶಿಷ್ಟ ಕಾರ್ಯಕ್ರಮದ ಆರಂಭ
ಎಎಪಿ ಬೆಂಗಳೂರು ಘಟಕ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ, 35 ವರ್ಷದೊಳಗಿನ ಯುವಜನತೆಯ ನೇತೃತ್ವದಲ್ಲಿ ನಡೆಯಲಿರುವ “ಬೊಂಬಾಟ್ ಬೆಂಗಳೂರು ಶ್ಯಾಡೋ ಕೌನ್ಸಿಲ್” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ.
ಬೆಂಗಳೂರಿನ ನಾಗರಿಕರು ಅಸಮರ್ಥ ಆಡಳಿತ ಮತ್ತು ಭ್ರಷ್ಟಾಚಾರದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಕಸ, ಸಂಚಾರದಟ್ಟಣೆ, ಪರಿಸರ ಮಾಲಿನ್ಯ, ನಶಿಸುತ್ತಿರುವ ಕೆರೆಗಳು ಮುಂತಾದ ಅನೇಕ ಸಮಸ್ಯೆಗಳನ್ನು ಎಲ್ಲಾ ಪಕ್ಷಗಳು ನಿರ್ಲಕ್ಷಿಸುತ್ತಲೇ ಬಂದಿವೆ. ಅನೇಕ ಯುವಕರು ಪ್ರಾಣ ತೆತ್ತ ಸಂದರ್ಭಗಳೂ ಇವೆ. ಸೇವಿಸುವ ಗಾಳಿ ಮತ್ತು ಕುಡಿಯುವ ನೀರಿನ ಮಾಲಿನ್ಯದಿಂದ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ನಿರಂತರ ದಾಳಿಗೊಳಗಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಮಾಣಿಕತೆ, ಬದ್ಧತೆ, ಹೊಸ ಚಿಂತನೆಗಳು ಮತ್ತು ರಾಜಕೀಯ ಇಚ್ಚಾಶಕ್ತಿ ಒಂದಾದಲ್ಲಿ ಕೇವಲ 4 ವರ್ಷಗಳಲ್ಲಿ ಏನೆಲ್ಲಾ ಸಾಧಿಸಬಹುದು ಎಂದು ದೆಹಲಿಯಲ್ಲಿ ಆಪ್ ಸರ್ಕಾರ ತೋರಿಸಿದೆ. ಈ ಸಾಧನೆಯಲ್ಲಿ ಸ್ಥಳೀಯ ಆಡಳಿತದಲ್ಲಿ ನಾಗರಿಕರ, ಅದರಲ್ಲೂ ಯುವಜನತೆಯ, ಭಾಗವಹಿಸುವಿಕೆಯೂ ಪ್ರಮುಖ ಕಾರಣ. ನಮ್ಮ ಕನಸು ಮತ್ತು ಗುರಿ “ಬೊಂಬಾಟ್ ಬೆಂಗಳೂರು”. ಬಿಬಿಎಂಪಿ ಯಿಂದ ಪ್ರಾರಂಭಿಸಿ, ಬೆಂಗಳೂರಿನ ಆಡಳಿತ ವ್ಯವಸ್ಥೆಯನ್ನು ನವೀಕರಿಸುವುದು.
“ಇಂದಿನ ಯುವಜನತೆ ಇತಿಹಾಸದ ವಿವೇಕಾನಂದರನ್ನು ಸ್ಮರಿಸುವುದು ಮಾತ್ರವಲ್ಲ, ನಾಳಿನ ವಿವೇಕಾನಂದರೂ ಆಗುವ ಪಣ ತೊಡಬೇಕು ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಆಧುನಿಕ ದಿನದ ಸಮಸ್ಯೆಗಳನ್ನು ಹಳೆಯ ಚಿಂತನೆಗಳ ಮೂಲಕ ಪರಿಹರಿಸಲಾಗುವುದಿಲ್ಲ. ಭಾರತದ ಜನಸಂಖ್ಯೆಯಲ್ಲಿ ಸುಮಾರು 35% ಇರುವ ಉತ್ಸಾಹಭರಿತ ಯುವಶಕ್ತಿ ಇಂದು ಬದಲಾವಣೆಯ ಹರಿಕಾರರಾಗಬೇಕು. ಎಎಪಿಯ ಬೆಂಗಳೂರಿನ ಯುವಕ, ಯುವತಿಯರು 88844 31214 ನಂಬರಿಗೆ ಕರೆ ಮಾಡಿ, “ಯೂತ್ ಕೌನ್ಸಿಲ್” ಗೆ ಸೇರಲು ಮುಂದೆ ಬರಬೇಕೆಂದು ಆಹ್ವಾನಿಸುತ್ತಿದೆ” ಎಂದು ಬಿಬಿಎಂಪಿ ಕ್ಯಾಂಪೇನ್ ತಂಡದ ಉಸ್ತುವಾರಿ ಶಾಂತಲಾ ದಾಮ್ಲೆ ಕರೆ ನೀಡಿದರು.
ಪ್ರತಿ ಬಿಬಿಎಂಪಿ ವಾರ್ಡಿಗೆ ಒಬ್ಬರಂತೆ ಯೂತ್ ಕೌನ್ಸಿಲರ್ ಗಳನ್ನು ನೇಮಕ ಮಾಡಲಾಗುತ್ತದೆ. ಮತದಾರರಲ್ಲಿ ಜಾಗೃತಿ ಮೂಡಿಸಿ, ಬಿಬಿಎಂಪಿಯನ್ನು ಸರಿದಾರಿಗೆ ತರುವಲ್ಲಿ ಯೂತ್ ಕೌನ್ಸಿಲರ್ ಗಳು ಮಹತ್ವದ ಪಾತ್ರ ವಹಿಸಲಿದ್ದಾರೆ. ಈಗಾಗಲೇ ವಾರ್ಡ್ 111 – ಶಾಂತಲಾನಗರಕ್ಕೆ ಅನಿಲ್ ಬಿ ನಾಚಪ್ಪ, ವಾರ್ಡ್ 27 – ಬಾಣಸವಾಡಿಗೆ ಅಲೆನ್ ಸೆಬಾಸ್ಟಿಯನ್, ವಾರ್ಡ್ 148 – ಈಜಿಪುರಕ್ಕೆ ನಸೀಮ್ ಕೌಸರ್, ವಾರ್ಡ್ 25 – ಹೊರಮಾವಿಗೆ ರಾಜೇಶ್ವರಿ ಡಿ, ವಾರ್ಡ್ 154 – ಬಸವನಗುಡಿಗೆ ರೋಶನ್ ಬಿಎನ್ ಇವರನ್ನು ಯೂತ್ ಕೌನ್ಸಿಲರ್ ಗಳಾಗಿ ನೇಮಕ ಮಾಡಲಾಗಿದೆ.
ಮೋಹನ್ ದಾಸರಿ, ಅಧ್ಯಕ್ಷರು, ಬೆಂಗಳೂರು ಮತ್ತು ಸಮೀರ್ ಅಸದ್ ಹೊಸಕೋಟೆ, ಯುವ ಕಾರ್ಯಕ್ರಮ ಸಂಯೋಜಕರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಏಳಿ! ಎದ್ದೇಳಿ !! ಗುರಿ ಮುಟ್ಟುವ ತನಕ ನಿಲ್ಲದಿರಿ’