ಹೊಸ ಆಯ್ಕೆ, ಹೊಸ ಬೆಂಗಳೂರು

ಪತ್ರಿಕಾ ಪ್ರಕಟಣೆ
27 ಜೂನ್ 2019

“ಹೊಸ ಆಯ್ಕೆ, ಹೊಸ ಬೆಂಗಳೂರು”

ದೆಹಲಿ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಜನಪರ ಆಡಳಿತ ನೀಡಿ, ಅನುಭವ ಪಡೆದ ಆಮ್ ಆದ್ಮಿ ಪಾರ್ಟಿ ಈಗ ನಮ್ಮ ಬೆಂಗಳೂರಿನ ಆಡಳಿತ ಸುಧಾರಣೆಯತ್ತ ಗಮನ ಹರಿಸಿದೆ.

ಈತ್ತೀಚೆಗೆ ನಡೆಸಿದ ಸರ್ವೇಕ್ಷಣೆಯ ಪ್ರಕಾರ ಬೆಂಗಳೂರಿನ ಜನರಿಗೆ ಧರ್ಮದ, ಜಾತಿಯ ವಿಷಯ ಅಷ್ಟು ಮಹತ್ವಪೂರ್ಣವಾಗಿರದೆ, ತಮ್ಮ ಜನಪ್ರತಿನಿಧಿಗಳು ಸುಶಿಕ್ಷಿತರಾಗಿರಲಿ, ಜವಾಬ್ದಾರಿಯುತವಾಗಿರಲಿ, ಕೆಲಸದಲ್ಲಿ ಪಾರದರ್ಶಕವಾಗಿದ್ದು, ಕೈಗೆ ಸಿಗುವಂತಿರಲಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಆಶಿಸುತ್ತಾರೆ.

ಒಮ್ಮೆ ಭಾರತದ ಸುಂದರ ನಗರಗಳಲ್ಲಿ ಒಂದು ಎನಿಸಿಕೊಂಡಿದ್ದ ಬೆಂಗಳೂರು, ಇತ್ತೀಚಿನ ದಶಕಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ದೃಷ್ಟಿಹೀನ ಕಾಮಗಾರಿಗಳು, ತಡೆದುಕೊಳ್ಳಲಾಗದ ವಿಕಾಸ ಮತ್ತು ಅಪಾರ ಭ್ರಷ್ಟಾಚಾರದಿಂದಾಗಿ ಕುಲಗೆಡುತ್ತಿದೆ. ಈಗಿರುವ ಜನನಾಯಕರು ಬೆಂಗಳೂರಿನ ರಕ್ಷಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದು, ನಗರವು ತನ್ನ ಸಂಸ್ಕೃತಿ, ಮನಮೋಹಕ ವಾತಾವರಣ, ಕೆರೆಗಳು, ಉದ್ಯಾನಗಳು, ಗಿಡ-ಮರ-ಪಶು-ಪಕ್ಷಿ ಸಂಕುಲ ಎಲ್ಲವನ್ನೂ ಕಳೆದುಕೊಂಡಿದೆ. ವಾಹನ ದಟ್ಟಣೆಯಿಂದಾಗಿ ಜನರು ತಮ್ಮ ಆರೋಗ್ಯ ಹಾಗು ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಉಳ್ಳವರು, ತಮ್ಮ ಮಕ್ಕಳ ಶಿಕ್ಷಣಕ್ಕೆ ರಾಶಿ ಹಣ ಸುರಿದರೆ ಇಲ್ಲದವರ ಪಾಡು ಶೋಚನೀಯ. ಎಲ್ಲೆಡಿ ಬಿದ್ದಿರುವ ಕಸದ ರಾಶಿ, ವಾಹನ ನಿಲುಗಡೆಗೆ ಇಲ್ಲದ ಸ್ಥಳಾವಕಾಶ, ವಾಹನ ದಟ್ಟಣೆ, ಲಗಾಮಿಲ್ಲದ ಭ್ರಷ್ಟಾಚಾರ ಇವುಗಳು ಬೆಂಗಳೂರಿನ ಹೊಸ ವ್ಯಾಖ್ಯಾನವಾಗಿದೆ. ನಮಗೆ ಈಗ ಬೇಕಾಗಿರುವುದು ಬುದ್ಧಿಹೀನ ಸೌಕರ್ಯಗಳ ಅಭಿವೃದ್ಧಿಯಲ್ಲ, ಬದಲಿಗೆ ಮಾನವ ವಿಕಾಸ. ನಗರದ ಜನರ ಜೀವನಕ್ಕೆ ಜೀವಕಳೆ ತುಂಬಿ ಇದನ್ನು ಎಲ್ಲರಿಗೂ ಸೇರಬೇಕಾದ “ಬೊಂಬಾಟ್ ಬೆಂಗಳೂರು” ಮಾಡಬೇಕಿದೆ, ಎಂದು ಆಮ್ ಆದ್ಮಿ ಪಾರ್ಟಿಯ ಯೋಜನೆ ಮತ್ತು ಅನುಸಂಧಾನ ಘಟಕದ ಮುಖ್ಯಸ್ಥ ಬಸವರಾಜ ಮುದಿಗೌಡರ್ ತಿಳಿಸಿದ್ದಾರೆ.

ಬೆಂಗಳೂರಿಗೆ ಬೇಕಾಗಿರುವುದು ಹೊಸ ಚಿಂತನೆ, ಹೊಸ ಮತ್ತು ಹಳೆಯ ಸಮಸ್ಯೆಗಳಿಗೆ ಹೊಸ ಪರಿಹಾರ. ಇದಕ್ಕೆ ಅವಶ್ಯಕವಾಗಿರುವುದು ಈಗಿರುವಂತಹ ಸ್ವಹಿತವನ್ನು ಕಾಪಾಡಿಕೊಳ್ಳುವ, ಆಸ್ತಿಯನ್ನು ವೃದ್ಧಿಸಿಕೊಳ್ಳುವ, ಜನನಾಯಕರ ಬದಲಾಗಿ ಜನಸಾಮಾನ್ಯರ ಜೀವನದ ಸ್ತರವನ್ನು ಉತ್ತಮಗೊಳಿಸುವ ಶಕ್ತಿಯುಳ್ಳ ಪ್ರಾಮಾಣಿಕ, ಬದ್ಧತೆಯುಳ್ಳ, ಶಿಕ್ಷಿತ ಜನಪ್ರತಿನಿಧಿಗಳು, ಎಂದು ಎಎಪಿ ರಾಜ್ಯ ಘಟಕದ ಸಹ-ಸಂಚಾಲಕಿ ಮತ್ತು ಬಿಬಿಎಂಪಿ ಕ್ಯಾಂಪೇನ್ ಮುಖ್ಯಸ್ಥೆ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ಈಗಿರುವ ಜನಪ್ರತಿನಿಧಿಗಳು ಧನಬಲ, ತೋಳ್ಬಲ ಉಳ್ಳವರು ಮತ್ತು ಅಪ-ಪ್ರಚಾರಮಾಡಿ ಚುನಾವಣೆ ಗೆಲ್ಲುವ ಯಂತ್ರಶಕ್ತಿ ಉಳ್ಳವರಾಗಿದ್ದಾರೆ. ಆದರೆ ಬಹಳ ಸಂಕೀರ್ಣಗೊಂಡಿರುವ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಶಕ್ತಿಯಾಗಲೀ ಮನೋಬಲವಾಗಲೀ ಅವರಿಗಿಲ್ಲ. ಗೆದ್ದ ನಂತರ ನಗರಕ್ಕೆ ಏನು ಮಾಡಬೇಕು ಎಂಬ ಕಾರ್ಯನೀತಿ ಅವರ ಬಳಿ ಇಲ್ಲ, ಅವರಲ್ಲಿರುವುದು ಕೇವಲ ತಮ್ಮ ಅಭಿವೃದ್ಧಿಯ ನಕ್ಷೆ. ಇಂತಹ ವ್ಯಕ್ತಿಗಳು ಮತ್ತು ಸಾಂಪ್ರದಾಯಿಕ ಪಕ್ಷಗಳು ಕೇವಲ ಬೆಂಗಳೂರು ನಗರವನ್ನು ಇನ್ನಷ್ಟು ನಾಶಪಡಿಸಬಲ್ಲರು.

ಬೆಂಗಳೂರಿನ ಮುನ್ನಡೆಗೆ ಆಮ್ ಆದ್ಮಿ ಪಾರ್ಟಿಯೊಂದೇ ಪರ್ಯಾಯ. ಭ್ರಷ್ಟ, ಅಪರಾಧಿ, ಕೋಮುವಾದಿ, ಜಾತಿವಾದಿ ಶಕ್ತಿಗಳನ್ನು ಹೊರಗಿಟ್ಟು, ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬಲ್ಲ, ಸಮರ್ಥ ಅಭ್ಯರ್ಥಿಗಳನ್ನು ನಗರ ಸೇವಕರನ್ನಾಗಿ ಆಯ್ಕೆ ಮಾಡುವ ಅವಕಾಶ ಜನರಿಗೆ ನೀಡಲಿದೆ ಎಎಪಿ.

“ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ” ಎಂಬ ಹಳೆಯ ವರಸೆ ಬೇಕಿಲ್ಲ. ನಮ್ಮ ನಗರದ ನೀರು – ಗಾಳಿ – ಕಸ ನಿರ್ವಣೆ ವ್ಯವಸ್ಥೆಯನ್ನು ಶುಚಿಗೊಳಿಸಿ, ಬಾಳಿಕೆಬರುವಂತಹ ಸೌಲಭ್ಯಗಳನ್ನು ನಿರ್ಮಿಸಿ, ನಮ್ಮ ಬೆಂಗಳೂರನ್ನು ಆರೋಗ್ಯಕರ ಬೆಂಗಳೂರನ್ನಾಗಿ ಮಾಡಬೇಕಿದೆ. ಈಗಿರುವ “ಕಟ್ ಮತ್ತು ಕಮಿಷನ್ ಮಹಾನಗರ ಪಾಲಿಕೆ” ಸಂಸ್ಕೃತಿ ಹೋಗಲಾಡಿಸಿ ಅದನ್ನು “ಬೊಂಬಾಟ್ ಬೆಂಗಳೂರು ಮಹಾನಗರ ಪಾಲಿಕೆ”ಯನ್ನಾಗಿ ಮಾಡವಂತಹ ಹೊಸ ರಾಜಕೀಯ ಸಂಸ್ಕೃತಿ ಬೆಳಸಬೇಕಿದೆ, ಎಂದು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.

ಮಾಲವಿಕ ಗುಬ್ಬಿವಾಣಿ
ಮುಖ್ಯಸ್ಥರು, ಸಂವಹನ ವಿಭಾಗ, ಬಿಬಿಎಂಪಿ ತಂಡ
ಆಮ್ ಆದ್ಮಿ ಪಾರ್ಟಿ, ಬೆಂಗಳೂರು
900087924

Leave a Reply

Your email address will not be published.

top