ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ
ಪತ್ರಿಕಾ ಪ್ರಕಟಣೆ
28 ಮೇ 2019
ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ
ಸಾವಿರಾರು ಕೋಟಿ ಹಣ ವ್ಯಯಿಸಿ ಸುಸ್ಥಿತಿಯಲ್ಲಿರುವ ಟಾರ್ ರಸ್ತೆಗಳಿಗೆ ಅನವಶ್ಯಕವಾಗಿ ಹಾಗೂ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈಟ್ ಟಾಪಿಂಗ್ ಮಾಡಿದ ರಸ್ತೆಗಳಲ್ಲಿ ಮಳೆನೀರು ಚರಂಡಿಗಳಿಗೆ ಸೇರದೇ ರಸ್ತೆಯ ಬದಿಯಲ್ಲಿರುವ ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ. ಇಂತಹ ಅವ್ಯವಸ್ಥಿತ, ಅವೈಜ್ಞಾನಿಕ ಕಾಮಗಾರಿಯನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಿಬಿಎಂಪಿ ನಡೆಯನ್ನು ಆಮ್ ಆದ್ಮಿ ಪಾರ್ಟಿಯು ತೀವ್ರವಾಗಿ ಖಂಡಿಸುತ್ತದೆ.
ಇತ್ತೀಚೆಗೆ ವರ್ತುಲ ರಸ್ತೆಯ ಸುಮನಹಳ್ಳಿಯಿಂದ ನಾಯಂಡಹಳ್ಳಿ ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಶುರುವಾಗಿದ್ದು, ಇದರಿಂದಾಗಿ ವಾಹನ ದಟ್ಟಣೆ ಯಾವಾಗಲೂ ಅಧಿಕವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಗಳು ಹೋಗಲು ಸಾಧ್ಯವಾಗದೇ ಜೀವಹಾನಿಯಾಗುವ ಸಾಧ್ಯತೆಯೂ ಇದೆ. ಈ ಕಾಮಗಾರಿಯ ಅವ್ಯವಸ್ಥೆ ಹೇಗಿದೆ ಎಂದರೆ ಬೈಕ್ ನಂತಹ ಸಣ್ಣ ಪುಟ್ಟ ಗಾಡಿಗಳು ದಟ್ಟಣೆಯನ್ನು ದಾಟಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.
“ಸುಸ್ಥಿತಿಯಲ್ಲಿರುವ ರಸ್ತೆಗಳನ್ನೂ ಅನವಶ್ಯಕವಾಗಿ ಹಾಗೂ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಮಾಡುತ್ತಿರುವುದರ ಮೂಲಕ ಬಿಬಿಎಂಪಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಉದಾಹರಣೆಗೆ ಹೆಬ್ಬಾಳದಿಂದ ಕೆ.ಆರ್.ಪುರಂ ಮೇಲ್ಸೇತುವೆಯ ಹೊರ ವರ್ತುಲ ರಸ್ತೆಯಲ್ಲಿ ವೈಟ್ ಟಾಪಿಂಗ್ ಆಗುತ್ತಿದೆ. ಈ ರಸ್ತೆ ಉತ್ತಮವಾಗಿಯೇ ಇತ್ತು. ವೈಟ್ ಟಾಂಪಿಂಗ್ ಅಗತ್ಯ ಇರಲಿಲ್ಲ, ಅದೇ ರೀತಿ ಫೋರಂ ಮಾಲ್ ಕೋರಮಂಗಲದಿಂದ ರಾಷ್ಟ್ರೀಯ ಕ್ರೀಡಾ ಗ್ರಾಮದವರೆಗಿನ ರಸ್ತೆ ವೈಟ್ ಟಾಪಿಂಗ್ ಆಗಿದೆ. ಎಲ್ಲಿ ನಿಜವಾದ ಅವಶ್ಯಕತೆ ಇದೆಯೋ ಅಲ್ಲಿ ಖರ್ಚು ಮಾಡುವ ಬದಲು, ಚೆನ್ನಾಗಿರುವ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುತ್ತಿರುವುದು ಹಣ ದೋಚಲು ಅಲ್ಲದೇ ಮತ್ಯಾವುದಕ್ಕೆ?” ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಬಿಬಿಎಂಪಿ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾರ್ ರಸ್ತೆಗೆ ಸಿಮೆಂಟ್ ಹಾಕಿ ಎತ್ತರಿಸುವ ಈ ಯೋಜನೆಯಲ್ಲಿ ಮಳೆ ನೀರು ಹೋಗಲು ಅವಕಾಶವೇ ಇಲ್ಲ. ಈ ಅವೈಜ್ಞಾನಿಕ ಯೋಜನೆಯಲ್ಲಿ ಮಳೆನೀರು ರಸ್ತೆಯಲ್ಲಿಯೇ ಉಳಿಯುವುದರಿಂದ ವಾಹನಗಳಿಗೆ ತೊಂದರೆಯಾಗುತ್ತಿದೆ. ಹಲವಾರು ಕಡೆಗಳಲ್ಲಿ ಮಳೆ ಹಾಗೂ ಕೊಳಕು ನೀರು ರಸ್ತೆ ಬದಿಗಳಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಹೋಗುತ್ತಿದ್ದು, ಇದರಿಂದಾಗಿ ಸಣ್ಣ ಪುಟ್ಟ ವ್ಯಾಪಾರಿಗಳ ದೈನಂದಿನ ಆದಾಯಕ್ಕೆ ಕುತ್ತುಂಟಾಗುತ್ತಿದೆ.
ವೈಟ್ ಟಾಪಿಂಗ್ ಖರ್ಚಿನ ವಿಷಯಕ್ಕೆ ಬರುವುದಾದರೆ ಪ್ರತಿ ಒಂದು ಕಿ.ಮೀ ಸಿಮೆಂಟ್ ರಸ್ತೆಗೆ ಬಿಬಿಎಂಪಿಯು ಸುಮಾರು 10.44 ಕೋಟಿ ಹಣವನ್ನು ವೆಚ್ಚ ಮಾಡುತ್ತದೆ. ಇದರ ವೆಚ್ಚ ತುಂಬಾ ದುಬಾರಿ. ಉತ್ತಮವಾದ ಬಹುಕಾಲ ಬಾಳಿಕೆ ಬರಬಲ್ಲ ಡಾಂಬರು ರಸ್ತೆಗಿಂತ ಮೂರ್ನಾಲ್ಕು ಪಟ್ಟು ಹಣ ಇದಕ್ಕಾಗಿ ಖರ್ಚಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸೂಕ್ತವಾದ ಜನಾಭಿಪ್ರಾಯ ಕೇಳದೆ ಅವೈಜ್ಞಾನಿಕ ವೈಟ್ ಟಾಪಿಂಗ್ ಕೆಲಸಕ್ಕೆ ನಡೆಸುತ್ತಿರುವುದು ಬಿಬಿಎಂಪಿಯ ಬೇಜವಾಬ್ದಾರಿತನವನ್ನು ಇದು ತೋರಿಸುತ್ತದೆ.
ಬಿಬಿಎಂಪಿಯೂ ಈ ಕೂಡಲೇ ದುಬಾರಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ನಡೆಸುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ನಿಲ್ಲಿಸಬೇಕು. ಇದರ ಪರ್ಯಾಯ ಮಾರ್ಗಗಳನ್ನು ಯೋಚಿಸಬೇಕು. ವೈಟ್ ಟಾಪಿಂಗ್ ನಂತಹ ಯೋಜನೆಗಳಲ್ಲಿ ಸಾರ್ವಜನಿಕರಿಗೆ, ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಬಿಬಿಎಂಪಿಯ ಜವಾಬ್ದಾರಿ. ಈ ಕುರಿತು ಬಿಬಿಎಂಪಿ ಕಾರ್ಯೋನ್ಮುಖವಾಗಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ.
ಧನ್ಯವಾದಗಳು
ಮಾಲವಿಕ ಗುಬ್ಬಿವಾಣಿ,
ಸಂವಹನ ಮುಖ್ಯಸ್ಥರು,
ಆಮ್ ಆದ್ಮಿ ಪಾರ್ಟಿ, ಬೆಂಗಳೂರು